ಪುಗಡಿಕುಣಿತ -
	ಹೆಂಗಸರ ಕುಣಿತ. ವಿಶಿಷ್ಟ ಬಗೆಯದು. ಹಿಂದೆ ಎಲ್ಲೆಡೆಯೂ ಸಾಕಷ್ಟು ಪ್ರಚಾರದಲ್ಲಿದ್ದ ಈ ಕುಣಿತ ಇಂದು ಉತ್ತರ ಕನ್ನಡ ಜಿಲ್ಲೆಯ ಆಗೇರರು, ಹಾಲಕ್ಕಿ ಒಕ್ಕಲಿಗರು ಮುಂತಾದ ಕೆಲವರಲ್ಲಿ ಮಾತ್ರ ಗೋಚರಿಸುತ್ತದೆ. ಕುಣಿತದ ರೀತಿ ಹಾಗೂ ಸಂದರ್ಭಗಳು ಬುಡಕಟ್ಟಿನಿಂದ ಬುಡಕಟ್ಟಿಗೆ ಭಿನ್ನವಾಗಿವೆ. ಆಗೇರರಲ್ಲಿ ಮಗು ಹುಟ್ಟಿ 'ಅಂವೆ ಶುದ್ಧ ಮಾಡುವಾಗ ಈ ಕುಣಿತ ಕುಣಿಯುತ್ತಾರೆ. ಯುವತಿಯರು ಸಮಸಂಖ್ಯೆಯಲ್ಲಿ ನಿಂತು, ಒಬ್ಬೊಬ್ಬರು ಒಂದೊಂದು ಬರಿದಾದ ತಾಮ್ರದ ಕೊಡವನ್ನು ಕೈಯಲ್ಲಿ ಹಿಡಿದು, 

	ಆಚುಮಲಿಂಗ ಈಚುಮಲಿಂಗ

	ಸೋಮೇ ತಿಮ್ಮಪ್ಪನ ಪುಗಡಿ ಮಲ್ಲಿಂಗ
ಎಂದು ಹಾಡುತ್ತಾ ಹಾಡಿನ ಗತ್ತಿಗೆ ಸರಿಯಾಗಿ ಕಟಿಕುಣಿಸುತ್ತಾ ಮೈ ಮಲಕಿಸುತ್ತ ಕುಣಿಯುವರು. ಹಾಗೆ ಕುಣಿಯುವಾಗ ಒಬ್ಬರ ಮೈಗೆ ಇನ್ನೊಬ್ಬರ ಮೈ ಸ್ಪರ್ಶವಾಗಬಾರದು. ಕುಣಿದು ಕುಣಿದು ಒಂದು ಪಂಗಡ ಸೋತ ಮೇಲೆ ಇನ್ನೊಂದು ಪಂಗಡ ಕುಣಿಯುತ್ತದೆ. ಕುಣಿದಾದ ಮೇಲೆ ತಾಮ್ರದ ಕೊಡವನ್ನು ಒಂದೆಡೆ ಮಗುಚಿಟ್ಟು ಕಾಯೊಡೆದು ಪೂಜಿಸುತ್ತಾರೆ. ಹಿಂದಕ್ಕೆ ದಿನವಿಡೀ ಜರುಗುತ್ತಿದ್ದ ಈ ನೃತ್ಯ ಇಂದು ಆಗೇರರಲ್ಲಿ ಕ್ವಚಿತ್ತಾಗಿ ಕೆಲವೆಡೆ ಮಾತ್ರ ಉಳಿದಿದೆ. ಅಂವೆ ಶುದ್ಧ ಮಾಡುವ ದಿನದ ಹೊರತಾಗಿ ಬೇರೆ ದಿನಗಳಲ್ಲಿ ಈ ಕುಣಿತ ಕುಣಿಯುವುದಿಲ್ಲ. 

	ಹಿಂದಕ್ಕೆ ಕೋಮಾರ ಪಂತರು, ಭಂಡಾರಿಗಳು, ಕೊಂಕಣ ಮರಾಠರು ಮೊದಲಾದ ಬುಡಕಟ್ಟಿನವರು ಗಣೇಶ ಚೌತಿಯ ಸಂದರ್ಭದಲ್ಲಿ ಗಣೇಶ ವಿಗ್ರಹದ ಮುಂದುಗಡೆ ಪುಗಡಿ ಕುಣಿಯುತ್ತಿದ್ದರು. ಇಬ್ಬರು ಯುವತಿಯರು ಬರಿದಾದ ಕೊಡದ ಬಾಯನ್ನು ತಮ್ಮ ಬಾಯಿ ಹತ್ತಿರ ಹಿಡಿದು ಕೊಡದ ಒಳಗಡೆ ಅಬುಸ್ ಅಬುಸ್ ಎಂದು ಊದುತ್ತ ಹಿನ್ನೆಲೆಯಲ್ಲಿ ಹಾಡುವ ಹಾಡುಗಾರ್ತಿಯರ ಹಾಡಿನ ಲಯಕ್ಕೆ ತಕ್ಕಂತೆ ಕಟಿಕುಣಿಸುತ್ತ ಕುಣಿಯುತ್ತಿದ್ದರು. ಇಂದು ಈ ನೃತ್ಯ ಕಣ್ಮರೆಯಾಗಿದೆ.

	ಹಾಲಕ್ಕಿ ಒಕ್ಕಲಿಗರಲ್ಲಿ ಪ್ರಚಲಿತವಿರುವ ಪುಗಡಿ ಕುಣಿತ ಸ್ವಲ್ಪ ಬೇರೆಯಾಗಿದೆ. ಹೆಂಗಳೆಯರೆಲ್ಲರೂ ಒಂದೆಡೆ ಗೋಲಾಕಾರವಾಗಿ ಒಬ್ಬರ ಕೈಯ್ಯನ್ನೊಬ್ಬರು ಗೆಂಚಿ ನಿಲ್ಲುತ್ತಾರೆ. ನುರಿತ ಒಬ್ಬಳು ಹಾಡುತ್ತಾಳೆ.

	ಪುಗಡೇ ಹಾಕೂವೇ ಪುಗಡೇ ಕೋಣೂವೇ

	ಸೋಮೀ ತಿಮ್ಮಪ್ಪರಾಯಾಗ್ ಶರಣಂಬೂವೇ ಪುಗಡೇ ಪೂ
-ಹೀಗೆ ಆಕೆ ಹಾಡಿದಂತೆ ಉಳಿದವರೂ ಹಾಡುತ್ತ ವೃತ್ತಾಕಾರದಲ್ಲಿ ನಿಂತ ಹಾಗೆಯೇ ಮುಂದಕ್ಕೆ ಹಾರಿ ಬಾಗಿ, ಮತ್ತೆ ಹಿಂದಕ್ಕೆ ಜಿಗಿದು ನಿಂತು, ಮತ್ತೆ ಮತ್ತೆ ಅದೇ ಕ್ರಮದಲ್ಲಿ ಕುಣಿಯುತ್ತಾರೆ. ಇವರಲ್ಲಿ ಪುಗಡಿಯನ್ನು ಇಂಥದೇ ನಿರ್ದಿಷ್ಟ ದಿನ ಕುಣಿಯಬೇಕೆಂಬ ನಿರ್ಬಂಧವಿಲ್ಲವಾದರೂ ದೀಪಾವಳಿಯಲ್ಲಿ ಬಲೀಂದ್ರನ ಮುಂದೆ ಹೆಚ್ಚಾಗಿ ಕುಣಿಯುವರು.

	ಪುಗಡಿ ಎನ್ನುವ ಪದ ಪುಗು ಧಾತುವಿನಿಂದ ನಿಷ್ಪನ್ನವಾದಂತಿದೆ. ಪುಗು-ಪುಗಲಿ>ಪಗಳಿ>ಪಗಡಿ ಎಂದರೆ ಪ್ರವೇಶಿಸಲಿ ಎಂದರ್ಥ. ಕಂದನಿಲ್ಲದ ಮನೆ ಬರಿದಾಗಿರುತ್ತದೆ, ಮನೆಯಲ್ಲಿ ಕೂಸು ಕಂದಯ್ಯ ಆಡಿ ಸುಖ ಸಂತೋಷ ತುಂಬಲಿ ಎಂಬ ಹಾರೈಕೆಯ ಹಿನ್ನೆಲೆಯಲ್ಲಿ, ಆಗೇರರಲ್ಲಿ ಅಂವೆ ಶುದ್ಧ ಮಾಡುವಾಗ ಪುಗಡಿ ಕುಣಿಯುವ ಸಂಪ್ರದಾಯ ಬೆಳೆದು ಬಂದಿರಬೇಕು. ಗಣೇಶ ಚೌತಿಯಂದು ದವಸಧಾನ್ಯಗಳಿಲ್ಲದೆ ಮನೆ ಬರಿದಾಗಿರುತ್ತದೆ. ಆ ಬರಿದಾಗಿರುವುದರ ಸಂಕೇತ ಖಾಲಿ ಕೊಡ. ಕೊಡದಲ್ಲಿ ಗಾಳಿಯೂದುವುದು ಬರಿದಾಗಿರುವುದರಲ್ಲಿ ಚೈತನ್ಯ ತುಂಬಿದುದರ ಸಂಕೇತ. ಮನೆ ದವಸಧಾನ್ಯಗಳಿಂದ ತುಂಬಿ ಸೂಸಲಿ-ಎಂಬ ಹಾರೈಕೆಯ ಧ್ವನಿ ಗಣೇಶ ಚೌತಿಯ ಸಂದರ್ಭದ ಪುಗಡಿಯಲ್ಲಿ ಅಡಗಿದೆ. ದೀಪಾವಳಿಯಲ್ಲಿ ಕೃಷಿ ಸ್ವಾಮಿಯಾದ ಬಲೀಂದ್ರನ ಆಗಮನದಿಂದ ಧಾನ್ಯ ಸಮೃದ್ಧಿಯಾದ ಸಂತೃಪ್ತಿಯ ಮೆರೆತ ದೀಪಾವಳಿಯ ಸಂದರ್ಭದ ಪುಗಡಿಯಲ್ಲಿ ಅಡಕವಾಗಿದೆ.
	(ಎನ್.ಆರ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ